ಸೂತ್ರದ ಬೊಂಬೆಯಾಟ -
	ಕೃತಕವಾಗಿ ರೂಪಿಸಿ ಸೂತ್ರವನ್ನಳ ವಡಿಸಿದ, ಆಡಿಸುವ ವ್ಯಕ್ತಿಯಿಂದ ಚಲನವಲನ ನಿಯಂತ್ರಿತವಾದ ಬೊಂಬೆಯನ್ನು (ಪಪೆಟ್) ಸೂತ್ರದಬೊಂಬೆ ಎಂದು ಕರೆಯಲಾಗುತ್ತದೆ (ಸ್ಟ್ರಿಂಗ್ ಪಪೆಟ್). ಇದನ್ನು ಆಡಿಸುವ ಆಟವೇ ಸೂತ್ರದಬೊಂಬೆಯಾಟ (ಸ್ಟ್ರಿಂಗ್‍ಪಪೆಟ್ ಶೋ). ಈ ಆಟ ಪ್ರಪಂಚಾದ್ಯಂತ ಜನಪ್ರಿಯತೆಗಳಿಸಿ ದ್ದರೂ ಇದರ ಉಗಮ, ಇತಿಹಾಸಗಳ ಬಗೆಗೆ ನಿರ್ದಿಷ್ಟತೆಗಳಿಲ್ಲ. ಮಾನವನ ಇತಿಹಾಸದ ಉಗಮದೊಂದಿಗೇ ಇದರ ಉಗಮವನ್ನು ಗುರುತಿಸುವ ಪ್ರಯತ್ನಗಳು ನಡೆದಿವೆ. ಪ್ರಾಚೀನ ಗ್ರೀಸ್ ಮತ್ತು ಇಟಲಿ ಗಳಲ್ಲಿ ಈ ಆಟದ ಕೆಲವು ಅವಶೇಷಗಳು ಲಭ್ಯವಾಗಿವೆ. ಈಜಿಪ್ಟಿನಲ್ಲಿ ಈ ಕಲೆ ಅತ್ಯಂತ ಪ್ರಚಲಿತವಾಗಿತ್ತು ಎಂಬುದಕ್ಕೆ ಆಧಾರಗಳಿವೆ. ಈಜಿಪ್ಟಿನ ಪಿರಮಿಡ್‍ಗಳ ಮೇಲೆ ಈ ಕಲೆಯ ಅವಶೇಷಗಳನ್ನು ಗುರುತಿಸಬಹುದು. ಯೂರಿಪಿಡೀಸನ ಕಾಲದಲ್ಲಿಯೇ ಅಥೆನ್ಸ್‍ನಲ್ಲಿ ಈ ಬೊಂಬೆಯಾಟವನ್ನು ಆಡಿಸಲಾಗುತ್ತಿತ್ತು ಎಂದು ಗುರುತಿಸಲಾಗಿದೆ. 

	ಗ್ರೀಕರು ಕ್ರಿ. ಪೂ. 5ನೆಯ ಶತಮಾನದಲ್ಲಿಯೇ ತಮ್ಮ ಮನರಂಜನೆಯ ಮುಖ್ಯ ಕಾರ್ಯಕ್ರಮವಾಗಿ ಬೊಂಬೆಯಾಟವನ್ನು ನಡೆಸುತ್ತಿದ್ದರು. ಇಂಗ್ಲೆಂಡಿನಲ್ಲಿಯೂ ಇದರ ಇತಿಹಾಸ ಹಳೆಯದೆ. ಸೀಸರ್ ಮಹಾರಾಜನ ಕಾಲಕ್ಕಾಗಲೇ ಈ ಆಟ ಹಳೆಯದಾಗಿತ್ತು. 2000 ವರ್ಷಗಳ ಹಿಂದೆಯೇ ಚೀನಿಯರು ಈ ಆಟವನ್ನು ಜನಪ್ರಿಯಗೊಳಿಸಿದ್ದರು. ಇಂಗ್ಲೆಂಡಿನಲ್ಲಿ ಪ್ರಚಲಿತದಲ್ಲಿದ್ದ ಪಂಜ್ ಅಂಡ್ ಜುಡಿ ಷೊ ಎಂಬುದು ಸೂತ್ರದ ಬೊಂಬೆಯಾಟದ ಪರ್ಯಾಯವೇ ಆಗಿದೆ ಎಂಬ ಅಭಿಪ್ರಾಯವನ್ನು ವಿದ್ವಾಂಸರು ನೀಡುತ್ತಾರೆ. 

	ಜಾವ, ಜಪಾನ್‍ಗಳಲ್ಲಿಯೂ ಇದರ ಜನಪ್ರಿಯತೆ ಬಹಳ ಪ್ರಾಚೀನವೇ. ಜಪಾನ್ ಮತ್ತು ಭಾರತಗಳಲ್ಲಿ ಮಾನವ ರಂಗಭೂಮಿಯ ಜೊತೆಯಲ್ಲಿಯೇ ಬೊಂಬೆಯಾಟದ ಬೆಳೆವಣಿಗೆಯನ್ನು ಗುರುತಿಸಲಾಗಿದೆ. ಮಾನವ ರಂಗಭೂಮಿಯ ಭದ್ರ ತಳಹದಿಗೆ ಕಾರಣ ಮತ್ತು ಪ್ರೇರಕ ಶಕ್ತಿಯಾಗಿ ಈ ಸೂತ್ರದ ಬೊಂಬೆಯಾಟ ಕಾಣಿಸಿಕೊಳ್ಳುತ್ತದೆ. 10ನೆಯ ಶತಮಾನದಲ್ಲಿ ಜಪಾನಿನಲ್ಲಿ ಈ ಆಟಕ್ಕೆ ಜೇಡಿಮಣ್ಣಿನ ಬೊಂಬೆಗಳನ್ನು ಬಳಸಲಾಗುತ್ತಿತ್ತು. 17ನೆಯ ಶತಮಾನದಲ್ಲಿ ಮೊದಲ ಬಾರಿಗೆ ಮರದ ಬೊಂಬೆಗಳನ್ನು ಬಳಕೆಗೆ ತರಲಾಯಿತೆಂದೂ ತಿಳಿದುಬರುತ್ತದೆ. 

	ಅಮೆರಿಕ ಮತ್ತು ಲ್ಯಾಟಿನ್ ಪ್ರದೇಶಗಳಲ್ಲಿ ಆ ಪ್ರದೇಶದ ಜನರಿಗಿಂತ ಹೆಚ್ಚಾಗಿ ಇಟಲಿಯಿಂದ ಬಂದ ವಲಸೆಗಾರರು ಸೂತ್ರದಬೊಂಬೆಗಳನ್ನು ಆಡಿಸುತ್ತಿದ್ದರು. ಜರ್ಮನಿ, ಫ್ರಾನ್ಸ್, ಇಟಲಿಗಳಲ್ಲಿ ಈ ಆಟ ಪ್ರಚಲಿತವಾಗಿದ್ದರೂ ಈ ಕಲೆ ಹೆಚ್ಚು ಮಹತ್ತ್ವಗಳಿಸಿದ್ದು ಇಟಲಿಯಲ್ಲಿ. 

	ಭಾರತದಲ್ಲಿಯೂ ಈ ಆಟ ಮಾನವ ರಂಗಭೂಮಿಯ ಜೊತೆ ಜೊತೆಗೇ ಬೆಳೆದುಬಂದಿದೆ. ನಾಟಕದ ಸೂತ್ರಧಾರನ ಕಲ್ಪನೆಯ ಹುಟ್ಟಿಗೆ ಸೂತ್ರದ ಬೊಂಬೆಯೇ ಪ್ರೇರಕ ಎನ್ನಲಾಗುತ್ತದೆ. 3000 ವರ್ಷಗಳಷ್ಟು ಹಿಂದಿನ ಸೂತ್ರದ ಬೊಂಬೆಯಾಟವೇ ಭಾರತದಲ್ಲಿ ಬಹಳ ಪ್ರಾಚೀನವಾದದ್ದು. ಸೂತ್ರದಬೊಂಬೆ ಆಟದವರಿಗೆ ರಾಜಾಶ್ರಯದ ಸಂಪರ್ಕ ಇತ್ತೆಂಬುದು ಗಮನಾರ್ಹ. ಏಕೆಂದರೆ ರಾಜದರ್ಬಾರುಗಳಲ್ಲಿ ರಾಜರುಗಳ ಅನುಮತಿಯಿಂದ ರಾಜರುಗಳಿಗಾಗಿ ರಾಜರ ಕಥೆಯನ್ನೇ ಒಳಗೊಂಡ ಆಟವಾಗಿ ಈ ಸೂತ್ರದ ಬೊಂಬೆಯಾಟ ಭಾರತದಲ್ಲಿ ನಡೆಯುತ್ತಿತ್ತು. ವಿಕ್ರಮಾದಿತ್ಯನ ಕಾಲದಲ್ಲಿ ಮೊದಲ ಬಾರಿಗೆ ಸಿಂಹಾಸನ ಬತೇರಿ ಎಂಬ ನಾಟಕವನ್ನು ಸೂತ್ರದಬೊಂಬೆಯ ಆಟಗಾರರೇ ರಚಿಸಿ, ಪ್ರದರ್ಶಿಸಿದುದಾಗಿ ತಿಳಿದುಬರುತ್ತದೆ. ಮುಂದೆ ರಾಜಾ ಅಮರಸಿಂಹ ತನ್ನ ಜೀವನವನ್ನು ಕುರಿತು ಬರೆಸಿದ ಅಮರಸಿಂಹ ರಾಠೋಡ ನಾಟಕ ಹೆಚ್ಚು ಜನಪ್ರಿಯತೆ ಗಳಿಸಿತ್ತು. ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಹಾಗೂ ಜನ್ನ, ರತ್ನಾಕರವರ್ಣಿ ಮೊದಲಾದವರ ಕಾವ್ಯಗಳಲ್ಲಿ ವಚನ ಸಾಹಿತ್ಯ ಹಾಗೂ ದಾಸರ ಹಲವು ಕೀರ್ತನೆಗಳಲ್ಲಿ ಸೂತ್ರದ ಬೊಂಬೆಯಾಟದ ಬಗೆಗೆ ಉಲ್ಲೇಖಗಳಿವೆ. 

	ಮನರಂಜನೆಯ ಅಂಶವೊಂದೇ ಅಲ್ಲದೆ ಮಳೆಬರಲೆಂದು, ಜಾನುವಾರುಗಳ ರೋಗನಿವಾರಣೆಯಾಗಲೆಂದು - ಹೀಗೆ ಹಲವಾರು ಜನಪದ ನಂಬಿಕೆಗಳು ಸೂತ್ರದ ಬೊಂಬೆಯಾಟದ ಹಿನ್ನೆಲೆಗಿದೆ.   ಆದ್ದರಿಂದಲೇ ಇಂತಹ ಆಟಗಳು ಜನಪದ ಸಂಸ್ಕøತಿಯೊಂದಿಗೇ ಬೆರೆತುಹೋಗಿವೆ. 

	ಸೂತ್ರದ ಬೊಂಬೆಯಾಟದಲ್ಲಿ ಆಟಕ್ಕೆ ಪ್ರಧಾನವಾಗುವ ವಿಷಯಗಳು ಪೌರಾಣಿಕ ಹಾಗೂ ಜನಪದ ಕಥಾ ಸಂದರ್ಭಗಳು, ಭಾರತದಂತಹ ದೇಶದಲ್ಲಿ ಇದು ಮನರಂಜನೆಯ ಹಾಗೂ ನಂಬಿಕೆಯ ಸಾಧನವಾಗಿದ್ದರೆ ಪಾಶ್ಚಾತ್ಯರಲ್ಲಿ ಮನರಂಜನೆಯೊಂದಿಗೆ ಆರ್ಥಿಕವಾಗಿ ಒಂದು ದೊಡ್ಡ ಉದ್ಯಮವಾಗಿ ಇದು ಬೆಳೆದಿದೆ. ಆದ್ದರಿಂದಲೇ ಈ ಆಟ ಅಲ್ಲಿ ಬೇರೆಯ ತಿರುವನ್ನೇ ಪಡೆದುಕೊಂಡು ಕಾಲದಿಂದ ಕಾಲಕ್ಕೆ  ಹೊಸತನವನ್ನು ಕಂಡುಕೊಳ್ಳುತ್ತ ಬಂದಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಜನಜಾಗೃತಿಗಾಗಿಯೂ ಸೂತ್ರದ ಬೊಂಬೆಯಾಟ ಬಳಕೆಯಾಯಿತು.						
	*

	ಕರ್ನಾಟಕದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಕರಾವಳಿಯ ಭಾಗಗಳಲ್ಲಿ ಈ ಆಟ ಕಂಡುಬರುತ್ತದೆ. ಇದನ್ನು ಪುತ್ಥಲಿಬೊಂಬೆಮೇಳ ಎಂದೂ ಕರೆಯುತ್ತಾರೆ. ಕರ್ನಾಟಕದಲ್ಲಿ ಈ ಕಲೆ ತುಂಬ ಹಿಂದಿನಿಂದಲೂ ಇತ್ತು ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಬಸವಣ್ಣನವರ ಕಾಲದಿಂದಲೂ ಇದರ ಉಲ್ಲೇಖ ಲಭ್ಯವಾಗುತ್ತದೆ. ಚೆನ್ನಬಸವಣ್ಣನವರ ಒಂದು ವಚನದಲ್ಲಿ ಸೂತ್ರದಬೊಂಬೆಗೆ ಪ್ರಾಣವುಂಟೆ ಎಂಬ ಮಾತು ಬರುತ್ತದೆ. ಬಸವಣ್ಣನವರ ಒಂದು ವಚನದಲ್ಲಿ ಜಗತ್ತೆಂಬ ಯಂತ್ರದ ಹಾಹೆಗೆ ಅಜ್ಞಾನವೆಂಬ ತುಷವ ತೊಡಿಸಿ, ಅಹಂಹಮತೆಯೆಂಬ ಸೊಕ್ಕನಿಕ್ಕಿ ಬಾರದ ಬಟ್ಟೆಯ ಬರಿಸಿ, ಕಾಣದ ದುಃಖವ ಕಾಣಿಸಿ, ಉಣ್ಣದ ಅಪೇಯವನುಣಿಸಿ ಮಾರಾರಿ ವಿನೋದಿಸಿದನಯ್ಯ ಎಂಬ ಉಲ್ಲೇಖ ಬರುತ್ತದೆ. ಬಹುರೂಪಿ ಚೌಡಯ್ಯ ತನ್ನ ಒಂದು ವಚನದಲ್ಲಿ ಬಸವಣ್ಣನೆನ್ನ ಬಹುರೂಪಕ್ಕೆ ಸೂತ್ರಧಾರಿಯಾದ ಎಂದಿದ್ದಾನೆ. ಹರಿಹರನ ಬಸವರಾಜದೇವರ ರಗಳೆಯಲ್ಲಿ ಶಿವನ ಮನೆಯ ತೊತ್ತಿನ ಮನೆಯ ತೊತ್ತಪ್ಪ ಮಾಯೆ ಮಾಡಿಸುವ ಮಣ್ಣರೂಪು, ಕಪ್ಪಡದ ಹಾಗೆ, ಕಲ್ಲಜಂತ್ರ, ಹುಲ್ಲಬೊಂಬೆ ಎಂಬ ಮಾತುಗಳು ಬರುತ್ತವೆ. ಏಕಾಂತ ರಾಮಯ್ಯನ ರಗಳೆಯಲ್ಲಿ ನೋಡೆ ಬೆತ್ತಲೆಯ ಬೊಂಬೆಗಳಿರಲ್ಕಳವಳಿದು ಎಂಬ ಮಾತು ಬರುತ್ತದೆ. ನೇಮಿಚಂದ್ರ ಮೊದಲಾದ ಕವಿಗಳೂ ಸೂತ್ರದ ಬೊಂಬೆಯಾಟಗಳ ಪ್ರಸ್ತಾಪವನ್ನು ಮಾಡಿದ್ದಾರೆ. ಪುರಂದರದಾಸ, ಕನಕದಾಸ ಮೊದಲಾದ ದಾಸರ ಕೀರ್ತನೆಗಳಲ್ಲಿಯೂ ಬೊಂಬೆಯಾಟಗಳ ಬಗ್ಗೆ ಉಲ್ಲೇಖಗಳು ಬರುತ್ತವೆ. ಡಿಂಭದಲ್ಲಿ ಪ್ರಾಣವಿರಲು ಕಾಂಬ ಸೂತ್ರದಗೊಂಬೆಯಂತೆ, ಬೆಳ್ಳಿ ಬಂಗಾರಿಟ್ಟುಕೊಂಡು ಒಳ್ಳೇವಸ್ತ್ರ ಹೊದ್ದುಕೊಂಡು ಅಳ್ಳಾಚಾರೀ ಗೊಂಬೆಯಂತೆ ಆಡಿ ಹೋದನು; ಡಿಂಭದೊಳುಕಾಂಬ ಸೂತ್ರಗೊಂಬೆ ಯಂತೆ; ಬೊಂಬೆಯಾಟವನಾಡಿಸಿದ ಮಹಾಭಾರತವ; ನೀನೆ ಆಡಿಸದಿರಲು ಜಡ ಒನಕೆಯಾ ಬೊಂಬೆ; ನೀನಿಟ್ಟ ಸೂತ್ರದಿಂ ಚಲಿಸುವುದು ಕೈಕಾಲು ಮುಂತಾದ ಮಾತುಗಳಲ್ಲಿ ಸೂತ್ರದ ಬೊಂಬೆಯಾಟ ಕರ್ನಾಟಕದಲ್ಲಿ ಎಷ್ಟು ಜನಪ್ರಿಯವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ರತ್ನಾಕರ ವರ್ಣಿಯ ಭರತೇಶ ವೈಭವದಲ್ಲಿಯೂ ಬೊಂಬೆಯಾಟಗಳ ಉಲ್ಲೇಖ ಬರುತ್ತದೆ. ಕರ್ನಾಟಕದಲ್ಲಿ ಸೂತ್ರದ ಬೊಂಬೆಯಾಟ ಅತ್ಯಂತ ಜನಪ್ರಿಯವಾಗಿತ್ತು ಎಂಬುದನ್ನು ಮೇಲಿನ ಉಲ್ಲೇಖಗಳು ಸಾರುತ್ತವೆ. 

	ಸೂತ್ರದ ಬೊಂಬೆಯಾಟ ಸಾಹಿತ್ಯ, ಸಂಗೀತ, ನೃತ್ಯ ಹಾಗೂ ವೇಷಭೂಷಣಗಳಲ್ಲಿ ಯಕ್ಷಗಾನ ಬಯಲಾಟಗಳಿಗೆ ಹತ್ತಿರವಾದ ಕಲೆ. ಆಯಾ ಪ್ರದೇಶಗಳ ಯಕ್ಷಗಾನಗಳ ಪ್ರಭಾವ ಸಹಜವಾಗಿ ಇದರ ಮೇಲೆ ಆಗಿರುತ್ತದೆ. ಬೊಂಬೆಯಾಟದ ಕಲಾವಿದರು ತಮ್ಮದೇ ಆದ ಸಂಘಗಳನ್ನು ಸ್ಥಾಪಿಸಿಕೊಂಡು ತಮ್ಮ ಸುತ್ತಿನಲ್ಲಿ ಬೊಂಬೆ ಮೇಳಗಳನ್ನು ನಡೆಸುತ್ತಾರೆ. ಊರಿನ ಕಲಾಭಿಮಾನಿಗಳೆಲ್ಲ ಕಲೆತು ಮೇಳವನ್ನು ನಡೆಸುವುದು ಇಲ್ಲಿ ಗಮನಾರ್ಹ. ಬೊಂಬೆಗಳು ಸಾಮಾನ್ಯವಾಗಿ ಒಂದು ಮನೆತನಕ್ಕೆ ಸೇರಿರುತ್ತವೆ. ಮಾಲೀಕರು ಯಾರೇ ಆದರೂ ಬೊಂಬೆ ಯಾಟದ ಕಲಾವಿದರು ಬ್ರಾಹ್ಮಣ, ಶೂದ್ರ ಎಂಬ ಭೇದವಿಲ್ಲದೆ ಬೊಂಬೆ ಯಾಟದ ಸಂಘವನ್ನು ಸ್ಥಾಪಿಸಿಕೊಳ್ಳುತ್ತಾರೆ. ಕೆಲವಾರು ತಿಂಗಳು ಬೊಂಬೆ ಗಳನ್ನು ಕುಣಿಸುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾರೆ. ಯಕ್ಷಗಾನ ಬಯಲಾಟಗಳಲ್ಲಿನ ಪಾತ್ರಗಳ ಹಂಚಿಕೆಯಂತೆ ಇಲ್ಲಿಯೂ ಹತ್ತಾರು ಜನ ಸೂತ್ರಧಾರಿಗಳು ಇರುತ್ತಾರೆ. ಒಬ್ಬೊಬ್ಬರು ಒಂದೊಂದು ಪಾತ್ರವನ್ನು ಹಂಚಿಕೊಂಡು ಸಂಭಾಷಣೆಯನ್ನು ಕಂಠಪಾಠ ಮಾಡಿಕೊಳ್ಳುತ್ತಾರೆ. ಸನ್ನಿವೇಶಕ್ಕೆ ತಕ್ಕಂತೆ ಬೊಂಬೆಗಳನ್ನು ರಂಗದ ಮೇಲೆ ತಂದು ಭಾಗವತರ ಹಾಡಿಗೆ ಅನುಗುಣವಾಗಿ ಕುಣಿಸುವುದು ಸೂತ್ರಧಾರಿಗಳ ಕಾರ್ಯ. ಬೊಂಬೆಯಾಟದ ತಂಡಗಳಲ್ಲಿ ಹದಿನೈದರಿಂದ ಇಪ್ಪತ್ತು ಮಂದಿ ಕಲಾವಿದರಿರುತ್ತಾರೆ. ಎಲ್ಲರೂ ಒಂದೊಂದು ಕಾರ್ಯವನ್ನು ಹಂಚಿಕೊಂಡು ಕಥೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಈ ಮೇಳಗಳ ಕಲಾವಿದರನ್ನು ಹೀಗೆ ವಿಂಗಡಿಸಿಕೊಳ್ಳಬಹದು : 

ಸಂಗೀತ : ಭಾಗವತರು, ತಾಳದವರು, ಹಿಮ್ಮೇಳದವರು, ಮುಖವೀಣೆ ಯವರು ಅಥವಾ ಚಂಡೆಯವರು. 

ಕುಣಿತ : ರಾಜಪಾತ್ರಗಳು, ಘೋರಪಾತ್ರಗಳು, ಸ್ತ್ರೀಪಾತ್ರಗಳು, ಹನುಮನಾಯಕ ಇತರ ಪಾತ್ರಗಳು. 

	ಸಹಾಯಕ ವರ್ಗ: ಕುಣಿಸುವವರಿಗೆ ಬೊಂಬೆಗಳನ್ನು ಒದಗಿಸುವವರು, ಇತರ ಸಹಾಯಕರು.

	ಸೂತ್ರದ ಬೊಂಬೆಯಾಟದಲ್ಲಿ ಮರದಿಂದ ಮಾಡಿದ ಬೊಂಬೆಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಎರಡು ಬಗೆಯ ಮರದ ಬಳಕೆ ಇಲ್ಲಿ ಕಂಡುಬರುತ್ತದೆ. ಬೊಂಬೆಗಳ ತಲೆಯ ಭಾಗ ಮತ್ತು ಹಸ್ತಗಳಿಗೆ ಗಟ್ಟಿಮರದ ಬಳಕೆ ಅಗತ್ಯ. ಇದಕ್ಕಾಗಿ ಬೆಪ್ಪಾಲೆ ಅಥವಾ ಸಿಲವಾರದ ಮರವನ್ನು ಬಳಸಲಾಗುತ್ತದೆ. ಕಿರೀಟ, ಕರ್ಣಾಹಾರ ಸೇರಿದಂತೆ. ತಲೆಯನ್ನು ಕುತ್ತಿಗೆಯವರೆಗೆ ಒಂದೇ ಮರದ ತುಂಡಿನಲ್ಲಿ ಕೆತ್ತಿ ಕಿರೀಟದ ತುದಿಯಲ್ಲಿ ಒಂದು ಕಬ್ಬಿಣದ ಕೊಂಡಿಯನ್ನು ಅಳವಡಿಸಲಾಗು ತ್ತದೆ. ಈ ಕೊಂಡಿಗೆ ಎರಡು ಅಥವಾ ಮೂರು ಅಡಿ ಉದ್ದದ ಮೂರು ಕರಿಯದಾರಗಳನ್ನು ಕಟ್ಟಲಾಗಿದ್ದು ಈ ದಾರಗಳ ಇನ್ನೊಂದು ತುದಿಯಲ್ಲಿ ಕುಣಿಸುವವನ ನೆತ್ತಿಗೆ ಅಳವಡುವಂತೆ ದೊಡ್ಡ ಕಬ್ಬಿಣದ ಬಳೆಯೊಂದಿರುತ್ತದೆ. ತಲೆಗೆ ವಸ್ತ್ರವನ್ನು ಸುತ್ತಿ ಬಳೆಯನ್ನು ನೆತ್ತಿಯ ಮೇಲೆ ಧರಿಸಿದರೆ, ಬೊಂಬೆಯು ಕಲಾವಿದನ ಹೊಟ್ಟೆಯ ಮೇಲೆ ಜಿಗಿ ಬೀಳುತ್ತದೆ. ಬೊಂಬೆಯನ್ನು ಕೈಯಲ್ಲಿ ಹಿಡಿದುಕೊಳ್ಳುವ ಅಗತ್ಯವನ್ನು ಕಲಾವಿದರು ಹೀಗೆ ನಿವಾರಿಸಿಕೊಳ್ಳುತ್ತಾರೆ. ಬೊಂಬೆಯ ಕೈ ಮತ್ತು ಮುಂಡದ ಭಾಗವನ್ನು ಹಾಲವಾಣದಂಥ ಹಗುರವಾದ ಮರದಿಂದ ಮಾಡುತ್ತಾರೆ. ಈ ಭಾಗ ಒಡವೆ ವಸ್ತ್ರಗಳಿಂದ ಮುಚ್ಚಿ ಹೋಗುವುದರಿಂದ ಇಲ್ಲಿ ಯಾವುದೇ ರೀತಿಯ ಕಲಾತ್ಮಕ ಕೆತ್ತನೆಯಾಗಲಿ ಬಣ್ಣಗಾರಿಕೆಯಾಗಲಿ ಕಂಡುಬರುವುದಿಲ್ಲ. ರುಂಡ ಮತ್ತು ಮುಂಡಗಳನ್ನು ರುಂಡದ (ಕುತ್ತಿಗೆಯ) ಭಾಗದಲ್ಲಿ ಒಂದು ಗೂಟದಿಂದ ಕೂಡಿಸಲಾಗು ತ್ತದೆ. ಈ ಗೂಟದಿಂದ ಬೊಂಬೆಯ ಮುಂಡದ ಕೆಳಭಾಗದವರೆಗೆ ಒಂದ ರಂಧ್ರದ ಮೂಲಕ ದಾರವನ್ನು ಅಳವಡಿಸಿ ಕೆಳಗೆ ಕಟ್ಟಲಾಗುವುದು. ಇದರಿಂದ ಬೊಂಬೆಯ ತಲೆಯನ್ನು ಅತ್ತ ಇತ್ತ ಆಡಿಸಲು ಅನುಕೂಲವಾ ಗುತ್ತದೆ. ಬೊಂಬೆಯ ಶರೀರಕ್ಕೆ ಕೈಗಳನ್ನು ಅಳವಡಿಸುವಲ್ಲಿ ಅನುಸರಿಸುವ ತಂತ್ರ ಕೈಗಳು ಚಲಿಸಲು ಅನುಕೂಲಕರವಾಗಿರುತ್ತದೆ. ಭುಜದ ಬಳಿ, ಮೊಣಕೈ ಬಳಿ ಮತ್ತು ಹಸ್ತದ ಬಳಿ ಒಂದೊಂದು ಕೀಲನ್ನು ಅಳವಡಿಸಿ ಸೂತ್ರಗಳ ಮೂಲಕ ಒಂದೊಂದನ್ನು ಸೇರಿಸುತ್ತಾರೆ. ಹಸ್ತಭಾಗದಲ್ಲಿ ಹೆಬ್ಬೆರಳು ಮತ್ತು ತೋರ್ಬೆರಳುಗಳನ್ನು ಕೂಡಿಸಿ ಮಾಡಲಾಗುತ್ತದೆ. ಅದರ ಮೂಲಕ ಕೈಗಳನ್ನು ಅತ್ತ ಇತ್ತ ಆಡಿಸಲು ನಾರಾಚಗಳೆಂಬ ಕಬ್ಬಿಣದ ಸಾಧನಗಳನ್ನು ಅಳವಡಿಸುತ್ತಾರೆ. ಇದು ಸು. 3| ಉದ್ದವಾಗಿದ್ದು ಒಂದು ತುದಿಯಲ್ಲಿ ಕೊಂಡಿಯನ್ನು ಹೊಂದಿರುತ್ತದೆ. ಮರದ ಹಿಡಿಗೆ ಬದಲಾಗಿ ಮೇಲುಭಾಗದಲ್ಲಿ ಬಳೆಯಂತೆ ಕಂಬಿಯನ್ನು ಬಾಗಿಸಿದರೂ ಹಿಡಿದುಕೊಳ್ಳಲು ಸಾಧನವಾಗುತ್ತದೆ. ಸೂತ್ರಧಾರ ಎರಡು ಕೈಗಳಲ್ಲೂ ಇಂಥ ನಾರಾಚಗಳನ್ನು ಹಿಡಿದಿರುತ್ತಾನೆ. ಬೊಂಬೆಯ ಕೈಗೂ ನಾರಾಚಕ್ಕೂ ಮತ್ತೊಂದು ತುದಿಯಲ್ಲಿ ಅಳವಡಿಸಿರುವುದರಿಂದ ಅದನ್ನು ನಿರ್ವಹಿಸಲು ಸುಲಭವಾಗುತ್ತದೆ. 

	ರುಂಡ ಮುಂಡ ಮತ್ತು ಕೈಗಳನ್ನು ಅಳವಡಿಸಿದ ಮೇಲೆ ಬೊಂಬೆ ಗಳಿಗೆ ಒಡವೆ ವಸ್ತ್ರಗಳನ್ನು ತೊಡಿಸಲಾಗುವುದು. ಬೆಳ್ಳೂರು ಭಾಗದ ಬೊಂಬೆಗಳಿಗೆ ಕಾಲುಗಳಿರುವುದಿಲ್ಲ. ಇತರ ಭಾಗದಲ್ಲಿ ಕಾಲುಗಳನ್ನು ಉಳಿಸಿಕೊಳ್ಳಲಾಗಿದೆ. ಕೈಗಳಂತೆಯೇ ಕಾಲುಗಳಿಗೂ ಮೂರು ಕೀಲುಗಳಿದ್ದು ಸಾಧಾರಣ ಮರದಿಂದ ಅವನ್ನು ಮಾಡಿರುತ್ತಾರೆ. ಬೆಳ್ಳೂರು ಬೊಂಬೆಗಳ ಕಾಲಿನ ಭಾಗವನ್ನು ವೀರಗಾಸೆ ಅಥವಾ ಕಚ್ಚೆಪಂಚೆಗಳಿಂದ ಮುಚ್ಚಲಾಗುತ್ತದೆ. ಬಹುಮಟ್ಟಿಗೆ ಬಣ್ಣದ ಲಂಗಗಳನ್ನು ಇಲ್ಲಿ ಬಳಸುತ್ತಾರೆ. ಬೊಂಬೆಗಳಿಗೆ ಬಣ್ಣಬಣ್ಣದ ವಸ್ತ್ರಗಳನ್ನು ಧರಿಸಲಾಗುತ್ತದೆ. ತುಂಬುದೋಳಿನ ಬಣ್ಣದ ಅಂಗಿ, ಹಸ್ತದವರೆಗೆ ಕೈಗಳನ್ನೂ ಸೊಂಟದವರೆಗೆ ಮೈಯನ್ನೂ ಮುಚ್ಚುತ್ತದೆ. ಅಲ್ಲಿಂದ ಕೆಳಗೆ ಸೀರೆ, ಲಂಗ ಅಥವಾ ಚಲ್ಲಣಗಳಿರುತ್ತವೆ. ಯಕ್ಷಗಾನ ಬಯಲಾಟಗಳಲ್ಲಿನಂತೆ ಭುಜಕೀರ್ತಿ, ಎದೆಹಾರ, ನಡುಪಟ್ಟಿ, ಕೈಕಟ್ಟುಗಳನ್ನು ಪ್ರತ್ಯೇಕವಾಗಿ ಕಟ್ಟಿ ಅಲಂಕರಿಸಲಾಗುತ್ತದೆ. 

	ಬೊಂಬೆಗಳ ಬಣ್ಣಗಾರಿಕೆಯಲ್ಲಿಯೂ ಕೆಲವು ವೈಶಿಷ್ಟ್ಯಗಳನ್ನು ಗಮನಿಸಬಹುದು. ರಾವಣ, ವಿಭೀಷಣ, ಹಿಡಿಂಬ ಮುಂತಾದ ಘೋರ ಪಾತ್ರಗಳಿಗೆ ಕೆಂಪುಬಣ್ಣವಿರುತ್ತದೆ. ಕಪ್ಪು ಮತ್ತು ಬಿಳಿಯ ಚುಕ್ಕೆಗಳನ್ನು ಕಣ್ಣು ಮತ್ತು ಬಾಯಿಗಳ ಸುತ್ತ ಹಾಕಿ, ಆ ಪಾತ್ರ ಸಾಕಷ್ಟು ಉಗ್ರವಾಗಿ ಕಾಣುವಂತೆ ಮಾಡಲಾಗುತ್ತದೆ. ಹಸ್ತದ ಭಾಗಕ್ಕೂ ಇದೇ ಬಣ್ಣವಿರುತ್ತದೆ. ರಾಜಪಾತ್ರಗಳಿಗೆ, ಸ್ತ್ರೀಪಾತ್ರಗಳಿಗೆ ಹಳದಿಯ ಬಣ್ಣವನ್ನು ಬಳಸಲಾಗು ತ್ತದೆ. ಉಳಿದ ಪಾತ್ರಗಳಿಗೆ ಕಂದು ಅಥವಾ ನಸುಹಸುರಿನಿಂದ ಕೂಡಿದ ಹಳದಿ ಬಣ್ಣ ಬಳಸಲಾಗುತ್ತದೆ. ದೈತ್ಯ ಪಾತ್ರಗಳು ಮತ್ತು ರಾಜಪಾತ್ರದ ಬೊಂಬೆಗಳಿಗೆ ಮಾತ್ರ ಭುಜಕೀರ್ತಿ ಮೊದಲಾದ ಆಭರಣಗಳನ್ನು ತೊಡಿಸಲಾಗುವುದು. ಉಳಿದ ಪಾತ್ರಗಳಿಗೆ ಸಾಧಾರಣ ಉಡುಪು ಇರುತ್ತದೆ. ಬ್ರಾಹ್ಮಣ, ಋಷಿ ಮುಂತಾದ ಪಾತ್ರಗಳಿಗೆ ಬಿಳಿಯ ಪಂಚೆಗಳನ್ನು ಮಾತ್ರ ಬಳಸಲಾಗುವುದು. ಹನುಮನಾಯಕನಿಗೆ ಬಣ್ಣದ ನಿಲುವಂಗಿ, ಚಲ್ಲಣಗಳನ್ನು ಅಳವಡಿಸಿ ತಲೆಗೆ ಸೇರಿದಂತೆಯೇ ಪೇಟವನ್ನೂ ಕೆತ್ತಲಾಗಿರುತ್ತದೆ. ಹೀಚನೂರು ಸಂಪ್ರದಾಯದಲ್ಲಿ ಬೊಂಬೆಗಳಿಗೆ ಮುಖವಾಡಗಳನ್ನು ಬಳಸುವ ವಿಶಿಷ್ಟ ಕೌಶಲ ಕಂಡುಬರುತ್ತದೆ. ನಾಟಕದ ನಡುವೆ ಹೆಚ್ಚು ಪಾತ್ರಗಳ ಅಗತ್ಯ ಕಂಡುಬಂದರೆ, ಮುಖವಾಡಗಳನ್ನು ಕಟ್ಟಿ ಅವೇ ಬೊಂಬೆಯನ್ನು ಬೇರೆ ಪಾತ್ರ ಎಂಬಂತೆ ಬಳಸಲಾಗುತ್ತದೆ. ಈ ಮುಖವಾಡದ ಬಳಕೆ ಬೇರೆ ಸಂಘಗಳಲ್ಲಿ ಕಂಡುಬಂದಿಲ್ಲ. ಒಂದು ಬೊಂಬೆಯಾಟ ಸಂಘದಲ್ಲಿ ಹೆಚ್ಚೆಂದರೆ ಐವತ್ತು ಬೊಂಬೆಗಳಿರಬಹುದು. ಈ ಬೊಂಬೆಗಳನ್ನು ದೊಡ್ಡ ದೊಡ್ಡ ಮರದ ಪೆಟ್ಟಿಗೆಗಳಲ್ಲಿ ರಕ್ಷಿಸಿ ಇಡಲಾಗುತ್ತದೆ. 

	ಬೊಂಬೆಯಾಟದ ರಂಗಮಂಚ ಅತ್ಯಂತ ಸರಳವಾದುದು. ಮೊದಲಿಗೆ ಕಟ್ಟಲ ನಿರ್ಮಾಣ ನಡೆಯುತ್ತದೆ. ನೆಲಕ್ಕೆ ಒಂದು ಅಡಿ ಎತ್ತರದಲ್ಲಿ ಹಲಗೆಗಳನ್ನು ಹಾಕಿ ಒಂದಕ್ಕೊಂದನ್ನು ಸೇರಿಸಿ ಬಿಗಿದು ಕಟ್ಟುವರು. ಮುಂಭಾಗವನ್ನು ಬಿಟ್ಟು ಉಳಿದ ಭಾಗಗಳನ್ನು ಸೋಗೆ ಅಥವಾ ಗೋಣಿಯ ತಾಟುಗಳಿಂದ ಮುಚ್ಚಲಾಗುವುದು. ಮರದ ಕೊಂಬೆಗಳನ್ನು ನಾಲ್ಕು ಮೂಲೆಗಳಿಗೂ ಉಳಿದೆಡೆಗೆ ಬಿದಿರುಗಳನ್ನೂ ಬಳಸಿ ಈ ಚಪ್ಪರವನ್ನು ಸಿದ್ಧಗೊಳಿಸಲಾಗುವುದು. ಚಪ್ಪರದ ಅಗಲ ಸು. 15 ಅಡಿಯಷ್ಟಿರುತ್ತದೆ. ಎತ್ತರ ಮತ್ತು ಉದ್ದ ಸು. 12 ಅಡಿಗಳು. ರಂಗದ ಮುಂಭಾಗಕ್ಕೆ ಎರಡು ಕಪ್ಪು ಪರದೆಗಳನ್ನು ಬಳಸುತ್ತಾರೆ. 12 ಅಡಿ ಉದ್ದ ಮತ್ತು 3 ಅಡಿ ಅಗಲದ ಈ ಪರದೆಗಳಲ್ಲಿ ಒಂದನ್ನು ಕೆಳಪರದೆಯಾಗಿಯೂ ಮತ್ತೊಂದನ್ನು ಮೇಲುಪರದೆಯನ್ನಾಗಿಯೂ ಬಳಸಲಾಗುತ್ತದೆ. ಕೆಳಪರದೆಯ ಮುಂದೆ ಪ್ರೇಕ್ಷಕರಿಗೆ ಅಭಿಮುಖವಾಗಿ ಬೊಂಬೆಗಳನ್ನು ಕುಣಿಸಲಾಗುವುದು. ಇದರ ಮೇಲುಭಾಗದಲ್ಲಿ ಬಲವಾದ ಅಡ್ಡಗಳುವೊಂದನ್ನು ಕಟ್ಟಿರುತ್ತಾರೆ. ತೆರೆಯ ಹಿಂದೆ ಕುಣಿಸುವವರು ಕಾಣಿಸದಂತೆ ಮೇಲುಪರದೆಯನ್ನು ಕಟ್ಟಲಾಗುತ್ತದೆ. ಮೇಲು ಪರದೆ ಮತ್ತೆ ಕೆಳಪರದೆಗಳು ಕೂಡುವ ಸ್ಥಳದಲ್ಲಿ ಅರ್ಧ ಅಡಿ ಅಂತರದಷ್ಟು ತೆರವಾದ ಜಾಗವಿರುತ್ತದೆ. ಕುಣಿಸುವಾಗ ಬೊಂಬೆಗಳನ್ನು ನೋಡುತ್ತ ಕುಣಿಸಲು ಇದರಿಂದ ಸಹಾಯಕವಾಗುತ್ತದೆ. ಈ ತೆರೆಗಳ ಜೊತೆಗೆ ಒಂದು ಅಂಕದ ಪರದೆಯೂ ಇರುತ್ತದೆ. ಆಟದ ಆರಂಭದಲ್ಲಿ ಆ ಪರದೆಯನ್ನು ತೆಗೆದರೆ ಮತ್ತೆ ಆಟ ಮುಗಿದಾಗ ಬಿಡಲಾಗುವುದು. ರಂಗದ ಮುಂದೆ ಎರಡು ಬದಿಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. 

	ರಂಗಮಂಚ ಸಿದ್ಧವಾದ ಮೇಲೆ ಕಲಾವಿದರು ಬೊಂಬೆಗಳನ್ನು ಪೆಟ್ಟಿಗೆಯಿಂದ ಹೊರತೆಗೆದು ಸಾಲಾಗಿ ಜೋಡಿಸಿ ವಾದ್ಯಗಳನ್ನೂ ಇರಿಸಿ ಪೂಜೆ ಮಾಡುವರು. ಅನಂತರ ರಂಗದ ಒಳಗೆ ಅಡ್ಡಲಾಗಿ ಕಟ್ಟಿಕೊಂಡ ಉದ್ದನೆಯ ಗಳುವೊಂದಕ್ಕೆ ಪ್ರತಿಬೊಂಬೆಯನ್ನೂ ಕಥೆಯ ಕ್ರಮವನ್ನು ಅನುಸರಿಸಿ ದಾರಗಳ ಸಹಾಯದಿಂದ ತೂಗುಬಿಡುವರು. ಕಥೆಮುಂದುವರಿದಾಗ ಬೇಕಾದ ಬೊಂಬೆಗಳನ್ನು ಸಹಾಯಕರು ಕೂಡಲೆ ತೆಗೆದುಕೊಡಲು ಇದು ಸಹಾಯಕವಾಗುತ್ತದೆ. 

ಸೂತ್ರದ ಬೊಂಬೆಯಾಟಗಳಿಗೆ ಯಕ್ಷಗಾನ ಬಯಲಾಟಗಳ ಸಾಹಿತ್ಯವನ್ನೇ ಬಳಸಿಕೊಳ್ಳಲಾಗುತ್ತದೆ. ಕಥಾವಸ್ತು ರಾಮಾಯಣ, ಮಹಾಭಾರತ, ಭಾಗವತ, ಶಿವಪುರಾಣ ಅಥವಾ ಜನಪದ ಮೂಲದಿಂದ ಬಂದದ್ದಾಗಿರಬಹುದು. ಒಂದೊಂದು ಬೊಂಬೆ ಮೇಳದವರಲ್ಲಿಯೂ ಅನೇಕ ಕಥೆಗಳ ಹಸ್ತಪ್ರತಿಗಳಿರುತ್ತವೆ. ಅಭಿಮನ್ಯು ಕಾಳಗ, ಕರಿಭಂಟನ ಕಥೆ, ಪಂಚವಟಿ ರಾಮಾಯಣ, ವಾಲಿ ಸುಗ್ರೀವ ಕಾಳಗ, ಇಂದ್ರಜಿತು ವಧೆ, ಮಹಿರಾವಣ ಚರಿತ್ರೆ, ಬಕಾಸುರ ವಧೆ, ತ್ರಿಪುರಸಂಹಾರ, ದೇವಿಮಹಾತ್ಮೆ ಮೊದಲಾದ ಕಥೆಗಳು ಬೊಂಬೆಯಾಟದಲ್ಲಿ ಜನಪ್ರಿಯವಾಗಿವೆ. 

	ಕರ್ನಾಟಕದ ಬೊಂಬೆಮೇಳಗಳನ್ನು ಪ್ರಾದೇಶಿಕ ಹಿನ್ನೆಲೆಯಲ್ಲಿ ಪಡುವಲಪಾಯ, ಮೂಡಲಪಾಯ ಎಂಬ ಎರಡು ಪ್ರಮುಖವರ್ಗಗಳಾಗಿ ಗುರುತಿಸಬಹುದು. ಕುಣಿತ, ಭಾಗವಂತಿಕೆ, ವಾದ್ಯವಿಶೇಷಗಳ ಬಳಕೆಯಲ್ಲಿ ಆಯಾ ವರ್ಗಗಳಿಗೇ ವಿಶಿಷ್ಟವಾದ ಅಂಶವನ್ನು ಕಾಣಬಹುದು. ಮೂಡಲಪಾಯದಲ್ಲಿ ಮೃದಂಗಧಾರಿಯಾಗಿ ಹಾಡುಗಾರಿಕೆಯನ್ನು ನಡೆಸುವ ಭಾಗವತರ ಜೊತೆಗೆ ಹಿಮ್ಮೇಳ ಹಾಡುವವರ ತಂಡ ಇರುತ್ತದೆ. ಜೊತೆಗೆ ಮುಖವೀಣೆ ಎಂಬ ವಿಶಿಷ್ಟವಾದ್ಯವನ್ನೂ ನುಡಿಸಲಾಗುತ್ತದೆ. ತಾಳದವರು ಒಬ್ಬಿಬ್ಬರು ಇರುತ್ತಾರೆ (ಶ್ರುತಿಗೆ ಇತ್ತೀಚೆಗೆ ಹಾರ್ಮೋನಿಯಂ ಬಳಸುತ್ತಿದ್ದಾರೆ. ಹಿಂದೆ ಸೋರೆಬುರುಡೆಯ ಶ್ರುತಿಯ ಸಾಧನವನ್ನು ಬಳಸುತ್ತಿದ್ದರು). ಪಡುವಲಪಾಯದಲ್ಲಿ ಮುಖವೀಣೆಯ ಬಳಕೆಯಿಲ್ಲ. ಹಿಮ್ಮೇಳದ ತಂಡವೂ ಇರುವುದಿಲ್ಲ. ಇಲ್ಲಿ ತಾಳ ಮದ್ದಲೆಗಳ ಜೊತೆಗೆ ಚಂಡೆಯನ್ನು ಬಳಸಲಾಗುತ್ತದೆ. ಮೂಡಲಪಾಯದಲ್ಲಿ ಸೂತ್ರವನ್ನು ನೆತ್ತಿಯಲ್ಲಿ ಧರಿಸಿದ ಕಲಾವಿದ ತಾನೂ ತೆರೆಯ ಹಿಂದೆ ತಾಳಕ್ಕನುಗುಣವಾಗಿ ಕುಣಿಯುತ್ತಾನೆ. ಅವನು ಕುಣಿದಾಗ ತೆರೆಯ ಮುಂದೆ ಬೊಂಬೆಯೂ ಅದೇ ಗತ್ತಿಗೆ ಕುಣಿಯುತ್ತದೆ. ಕೈಗಳನ್ನು ನಾರಾಚದ ನೆರವಿನಿಂದ ಅತ್ತಿತ್ತ ಆಡಿಸುತ್ತಾನೆ. ಮಾತುಗಳನ್ನು ಪಾತ್ರಧಾರಿ ಆಡುತ್ತಾನೆ. ಪಡುವಲಪಾಯದ ಬೊಂಬೆಗಳು ಚಿಕ್ಕಪ್ರಮಾಣದವಾದ್ದರಿಂದ ಕೈಯಲ್ಲೇ ಸೂತ್ರಗಳನ್ನು ಹಿಡಿದು ಕುಣಿಸುತ್ತಾರೆ. ಇಲ್ಲಿ ಸೂತ್ರ ಅತ್ಯಂತ ಸೂಕ್ಷ್ಮವಾದದ್ದಾಗಿರುತ್ತದೆ. ನಾರಾಚಗಳ ಬಳಕೆ ಇಲ್ಲಿ ಕಂಡುಬರುವುದಿಲ್ಲ. ವೇಷಭೂಷಣಗಳು ಪಡುವಲಪಾಯ ಯಕ್ಷಗಾನ ಸಂಪ್ರದಾಯಾನು ಸಾರಿಯಾಗಿಯೇ ಇರುತ್ತವೆ. ಮೂಡಲಪಾಯದಲ್ಲಿ ರಾಕ್ಷಸ ಪಾತ್ರಗಳು ರಂಗವನ್ನು ಪ್ರವೇಶಿಸುವಾಗ ಎರಡು ಕೈಗಳಲ್ಲೂ ಪಂಜುಗಳನ್ನು ಉರಿಸುತ್ತಲೇ ಪ್ರವೇಶಿಸುವ ದೃಶ್ಯ, ಉರಿಯ ಮೇಲೆ ಗುಗ್ಗಳವನ್ನು ಎರಚಿ ಮತ್ತಷ್ಟು ಅಶ್ಚರ್ಯವನ್ನುಂಟು ಮಾಡುವ ವೈಖರಿ ಗಮನಾರ್ಹ ವಾದುದು. ಹನುಮನಾಯಕನ ಬಾಯಿಗೆ ಹೊಗೆಬತ್ತಿಯೊಂದನ್ನು ಕೊಟ್ಟು ಸೇದಿಸುವ ಪ್ರಸಂಗ ಕೌತುಕವನ್ನುಂಟುಮಾಡುತ್ತದೆ. ಕೆಲವು ಸಂದರ್ಭ ಗಳಲ್ಲಿ ಜರಾಸಂಧನಂಥ ಪಾತ್ರವನ್ನು ಎರಡು ಭಾಗವಾಗಿ ಸೀಳಿ ಎಸೆಯುವ ದೃಶ್ಯವನ್ನು ಬೊಂಬೆಯಾಟದವರು ತರಬಲ್ಲರು. 

	ಕರ್ನಾಟಕದ ಜನಪದ ರಂಗಭೂಮಿಯಲ್ಲಿ ಬೊಂಬೆಯಾಟಗಳ ಪಾತ್ರ ವಿಶಿಷ್ಟವಾದುದು. ಸುಶ್ರಾವ್ಯ ಸಂಗೀತ, ಸ್ವಾರಸ್ಯಪೂರ್ಣ ಸಂಭಾಷಣೆ, ಆಕರ್ಷಕ ಕುಣಿತ, ತಾಳಮೇಳ, ವೈಭವಪೂರ್ಣ ವೇಷಭೂಷಣ, ಅದಕ್ಕೊಪ್ಪುವ ಪುಟ್ಟ ರಂಗಶಾಲೆ ಇವುಗಳಿಂದ ಸೂತ್ರದ ಬೊಂಬೆಯಾಟ ಒಳ್ಳೆಯ ಕಲೆಯಾಗಿದೆ. ಅನೇಕ ಪ್ರಸಿದ್ಧ ಮೇಳಗಳು ಕಣ್ಮರೆಯಾಗಿದ್ದರೂ ಇನ್ನೂ ಕೆಲವು ತಂಡಗಳು ಉಳಿದು ಬೊಂಬೆ ಮೇಳಗಳನ್ನು ನಡೆಸುತ್ತಿವೆ. 

	ಕರ್ನಾಟಕದಲ್ಲಿ ಸೂತ್ರದ ಬೊಂಬೆಯಾಟದ ಜೊತೆಗೆ ತೊಗಲು ಬೊಂಬೆಯಾಟ, ಕೀಲುಬೊಂಬೆಯಾಟವೆಂಬ ಪ್ರಕಾರಗಳೂ ಕಂಡುಬರು ತ್ತವೆ. ಇವುಗಳಲ್ಲಿ ತೊಗಲುಬೊಂಬೆಯಾಟ ಯಕ್ಷಗಾನ ಸಂಬಂಧಿ ಯಾದರೂ ಇಲ್ಲಿ ಕಲಾವಿದರು ಕಥೆಯೊಂದನ್ನು ಆಧಾರವಾಗಿಟ್ಟುಕೊಂಡು ಬೊಂಬೆಗಳನ್ನು ಕುಣಿಸಿ ಮೇಳವನ್ನು ನಡೆಸುತ್ತಾರೆ. ಆದರೆ ಕೀಲುಬೊಂಬೆ ಯಾಟ ಕೇವಲ ಮನರಂಜನೆಗಾಗಿ ವಿವಿಧ ವೇಷದ ಬೊಂಬೆಗಳನ್ನು ಆಡಿಸುವ ಒಂದು ಕಲೆಯಾಗಿದೆ. ನವರಾತ್ರಿಯ ಬೊಂಬೆಗಳು, ಗೌರಿಯ ಬೊಂಬೆಗಳು ಮುಂತಾದ ಬೊಂಬೆಗಳ ಪ್ರದರ್ಶನವೂ ಕರ್ನಾಟಕದಲ್ಲಿ ಕಂಡು ಬರುತ್ತದೆ. ಇವು ನಿರ್ದಿಷ್ಟ ಸಂದರ್ಭದಲ್ಲಿ ಮನೆಗಳಲ್ಲಿ ಜೋಡಿಸುವ ಬೊಂಬೆಗಳು. ಇಲ್ಲಿ ಕುಣಿಸುವ ಕಲೆ ಇಲ್ಲ.  
 	
 (ನೋಡಿ- ತೊಗಲುಗೊಂಬೆಯಾಟ)

	ಸೂತ್ರದಬೊಂಬೆಯಾಟವನ್ನು ಕುರಿತು ಕೆ.ಶಿವರಾಮ ಕಾರಂತ (1962), ಡಿ.ಕೆ.ರಾಜೇಂದ್ರ (1983) ಅವರು ಗಂಭೀರ ಅಧ್ಯಯನಗಳನ್ನು ಮಾಡಿದ್ದಾರೆ. ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ ಈ ಕಲೆಯನ್ನು ಕುರಿತ ವಿಶೇಷ ದಾಖಲಾತಿಗಳನ್ನು ಮಾಡಿದೆ. 								
	(ಜೆ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ